ಬಾಫನ್, ವಿಲಿಯಮ್
1584-1622. ಇಂಗ್ಲಿಷ್ ನಾವಿಕ ಮತ್ತು ಸಂಶೋಧಕ. ಕೆನಡಾದ ಉತ್ತರಕ್ಕಿರುವ ಆರ್ಕಟಿಕ್ ಸಾಗರದ ಮೂಲಕ ಪೆಸಿಫಿಕ್ ಸಾಗರಕ್ಕೆ ವಾಯವ್ಯ ಸಮುದ್ರ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ. 1612ರಲ್ಲಿ ಕ್ಯಾಪ್ಟನ್ ಜೇಮ್ಸ್‍ಹಾಲ್ ಎಂಬ ಬ್ರಿಟಿಷ್ ನಾವಿಕನೊಡನೆ ಸಮುದ್ರ ಯಾನ ಮಾಡಿದ್ದ. ಈತ 1615ರಲ್ಲಿ ಕ್ಯಾಪ್ಟನ್ ರಾಬರ್ಟ್‍ಬೈಲಾಟ್ ಎಂಬವನ ಜೊತೆ ಡಿಸ್ಕವರಿ ಎಂಬ ಹಡಗಿನಲ್ಲಿ ಯಾನಿಸಿ ಹಡ್ಸನ್ ಜಲಸಂಧಿಯನ್ನು ಪರೀಕ್ಷಿಸಿ ಬಂದ. ಮತ್ತೆ 1616ರಲ್ಲಿ ಅದೇ ನೌಕೆಯ ಚಾಲಕನಾಗಿ ಹೊರಟು ಇಂಗ್ಲೆಂಡಿನ ನಾವಿಕ ಜನ್ ಡೇವಿಸ್ 1587ರಲ್ಲಿ ಪ್ರವಾಸ ಮಾಡಿದ್ದ ದೂರಕ್ಕಿಂತಲೂ 483ಕಿಮೀ ಹೆಚ್ಚಿನ ದೂರ ಹಡ್ಸನ್ ಜಲಸಂಧಿಯಲ್ಲಿ ಯಾನಿಸಿ ಅಲ್ಲಿದ್ದ ದ್ವೀಪವನ್ನು ಪತ್ತೆ ಮಾಡಿದ. ಅದಕ್ಕೆ ಆತನ ಹೆಸರನ್ನೇ ಕೊಟ್ಟು ಬಾಫನ್ ದ್ವೀಪವೆಂದು ಕರೆಯಲಾಯಿತು. ಹಾಗೆ ಗ್ರೀನ್‍ಲೆಂಡ್ ಮತ್ತು ಬಾಫನ್ ದ್ವೀಪದ ನಡುವಿನ ಜಲಭಾಗಕ್ಕೆ ಬಾಫನ್ ಕೊಲ್ಲಿ ಎಂದು ಹೆಸರಿಡಲಾಯಿತು. ಸಮುದ್ರ ಯಾನದ ವೇಳೆ ಚಂದ್ರನ ಚಲನೆ ಅಧ್ಯಯನಮಾಡಿ ರೇಖಾಂಶ ನಿರ್ಧರಿಸಿದವರ ಪೈಕಿ ಬಾಫನ್ ಮೊದಲಿಗ. ಮುಂದೆ ಈತ ಈಸ್ಟ್ ಇಂಡಿಯಾ ಕಂಪೆನಿಯ ಸೇವೆಗೆ ಸೇರಿ ಕೆಂಪು ಸಮುದ್ರ ಹಾಗೂ ಪರ್ಷಿಯಾ ಕೊಲ್ಲಿಗಳ ಸರ್ವೇಕ್ಷಣೆ ನಡೆಸಿದ. ಅವನು ಮತ್ತೆ ಪರ್ಷಿಯಾ ಕೊಲ್ಲಿಗೆ ಹೋದಾಗ ಆರ್ಮಜ್óರೇವಿನ ಮೇಲೆ ಬ್ರಿಟಿಷ್ ಹಾಗೂ ಪರ್ಷಿಯಾ ಪಡೆಗಳು ನಡೆಸಿದ ದಾಳಿಯಲ್ಲಿ ಗಾಯಗೊಂಡು 1622 ಜನವರಿ 23 ರಂದು ನಿಧನನಾದ.						(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ